ಶಿರಾಡಿ ಘಾಟ್ -ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ: ಹಾಸನ-ಕೊಡಗು ದಂಡಾಧಿಕಾರಿಗಳ ಆದೇಶ
ಬೆಳ್ತಂಗಡಿ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡತಪ್ಪಲು ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಹಾಸನ ಜಿಲ್ಲಾ ದಂಡಾಧಿಕಾರಿಯವರು ಜುಲೈ18-2024ರಂದು ಆದೇಶ ಹೊರಡಿಸಿದ್ದಾರೆ. ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ (ತುರ್ತುಪರಿಸ್ಥಿತಿ ವಾಹನ ಹೊರತುಪಡಿಸಿ) ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳು ತಾತ್ಕಾಲಿಕ ಪರ್ಯಾಯ ರಸ್ತೆಯಾದ ಹಾಸನ-ಬೇಲೂರು- ಮೂಡಿಗೆರೆ-ಚಾರ್ಮಾಡಿ ಘಾಟ್ ರಸ್ತೆಯನ್ನು ಬಳಸಬಹುದಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿರಾಡಿ ಘಾಟ್ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಪಾಜೆ-ಮಡಿಕೇರಿ ರಸ್ತೆಯ ನಡುವಿನ ಕೆಲವು ಪ್ರದೇಶದಲ್ಲಿ ಭೂಕುಸಿತ, ಗುಡ್ಡ ಕುಸಿತ ಸಂಭವವಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜುಲೈ 18-2024ರಿಂದ 22ರವರೆಗೆ ಪ್ರತಿದಿನ ರಾತ್ರಿ 8.00 ಗಂಟೆಯಿಂದ ಮರುದಿನ ಬೆಳಿಗ್ಗೆ 6.೦೦ ಗಂಟೆಯವರೆಗೆ ಹೆದ್ದಾರಿಯಲ್ಲಿ (ತುರ್ತು ಸೇವೆ, ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ) ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕೊಡಗು ಜಿಲ್ಲಾ ದಂಡಾಧಿಕಾರಿಯವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲಾ ದಂಡಾಧಿಕಾರಿಯವರು ಗುರುವಾರ ಹೊರಡಿಸಿರುವ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಮೈಸೂರು, ಬೆಂಗಳೂರು ಮುಂತಾದ ಕಡೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾಗಿ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿದೆ. ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Post Comment