‘ಹೆಲ್ಪ್ ಲೈನ್’ ಬಲೆಗೆ ಬಿದ್ದು ಹಣ ಕಳೆದುಕೊಂಡ ಗಾಯಕ ಅರವಿಂದ ವಿವೇಕ್ : ಬೆಂಗಳೂರಿನ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ವಂಚನೆ ಕೇಸು ದಾಖಲು

ಬೆಳ್ತಂಗಡಿ : ನೊಂದವರಿಗೆ ಸಹಾಯ ಮಾಡುತ್ತಿರುವುದಾಗಿ ನಂಬಿಸಿ ಪ್ರಕರಣವೊಂದನ್ನು ಹೈಕೋರ್ಟ್ ನಲ್ಲಿ ಬಗೆಹರಿಸಿ ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬುವರ ವಿರುದ್ಧ ದ. ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಗೆಹರಿಸುವುದಾಗಿ ಹೇಳಿ ಸಂಧ್ಯಾ ಪವಿತ್ರ ನಾಗರಾಜ್ ಹಣ ಪಡೆದಿದ್ದಾಳೆ ಎಂದು ಹವ್ಯಾಸಿ ಗಾಯಕ ರಾಜೇಶ್ (ಅರವಿಂದ್ ವಿವೇಕ್ ) ಅವರ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ ಅನ್ವಯ ಇದೀಗ ಪ್ರಕರಣ ದಾಖಲಾಗಿದೆ. ದೂರುದಾರ ರಾಜೇಶ್ ಎಂಬವರಿಗೆ
ಸಂಧ್ಯಾ ನಾಗರಾಜ್ 2024ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದರು.
ತಾನು ವಂಚನೆಗೊಳಗಾದವರಿಗೆ ಹೆಲ್ಪ್ ಲೈನ್ ಮೂಲಕ
ನೆರವಾಗುತ್ತಿದ್ದೇನೆ. ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸಿದ್ದೇನೆ ಎಂಬುದಾಗಿ ರಾಜೇಶ್ ಅವರಿಗೆ ನಂಬಿಸಿದ್ದು ಇದನ್ನು ನಂಬಿದ ರಾಜೇಶ್ ಅವರು ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್ಗೆ ವಿವರವಾಗಿ ತಿಳಿಸಿದ್ದಾರೆ.
ಆಗ, ಸಂಧ್ಯಾ ಹೈಕೋರ್ಟ್ನಲ್ಲಿ ಕೇಸ್ ಬಗೆಹರಿಸುತ್ತೇನೆ, ಆದರೆ, ಸ್ವಲ್ಪ ಖರ್ಚು ಇದೆ ಎಂದು ಹೇಳಿ ರಾಜೇಶ್ ಅವರಿಂದ ಸಂಧ್ಯಾ ನಾಗರಾಜ್ ಹಂತ ಹಂತವಾಗಿ 3.20 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಯಾಕೆ ಸಮಸ್ಯೆ ಬಗೆಹರಿದಿಲ್ಲ ಎಂದು ಸಂಧ್ಯಾಗೆ ಪ್ರಶ್ನಿಸಿದ್ದಾರೆ. ಆಗ, ಸಂಧ್ಯಾ ಮತ್ತೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು ಸಂಧ್ಯಾ ಮಾತು ಕೇಳಿ ಸಂಶಯಗೊಂಡ ರಾಜೇಶ್ ಅವರು ಕೋರ್ಟ್ ಗೆ ಸಲ್ಲಿಸಿರುವ ದಾಖಲೆಗಳ ಬಗ್ಗೆ ವಿಚಾರಿಸಿದ್ದಾರೆ.
ಆಗ ಸಂಧ್ಯಾ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಹಿನ್ನಲೆಯಲ್ಲಿ ರಾಜೇಶ್ಪುಂ ಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಬಿಎನ್ಎಸ್ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Post Comment