ಕಳೆಂಜ: ನಂದಗೋಕುಲ ಗೋಶಾಲೆಯಲ್ಲಿ ಮೇ 26ರಂದು ‘ನಂದಗೋಕುಲ ದೀಪೋತ್ಸವ’ “ಪುಣ್ಯಕೋಟಿಗೆ ಒಂದುಕೋಟಿ, ಗೋಮಾತೆಗೆ ಕೋಟಿಯ ನಮನ” ವಿಶಿಷ್ಟ ಕಾರ್ಯಕ್ರಮ

ಬೆಳ್ತಂಗಡಿ : ದೇಶೀ ಗೋ ತಳಿಗಳ ರಕ್ಷಣೆ, ಪಾರಂಪರಿಕ ಗೋ ಆಧಾರಿತ ಕೃಷಿ ವಿಧಾನಗಳ ಬಗ್ಗೆ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಕಳೆಂಜ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಾಪನೆಗೊಂಡ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ನಂದಗೋಕುಲ ಗೋ ಶಾಲೆಯಲ್ಲಿ ಮೇ 26ರಂದು ಸಂಜೆ ‘ನಂದ ಗೋಕುಲ ದೀಪೋತ್ಸವ’ “ಪುಣ್ಯಕೋಟಿಗೆ ಒಂದು ಕೋಟಿ, ಗೋಮಾತೆಗೆ ಕೋಟಿಯ ನಮನ” ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.
ಬೆಳ್ತಂಗಡಿ ಟ್ರಸ್ಟ್ ಕಚೇರಿಯಲ್ಲಿ ಮೇ 16 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ದೇಶೀ ಗೋಸಂತತಿಯನ್ನು ಉಳಿಸುವ, ಬೆಳೆಸುವ ಹಾಗೂ ನಿರ್ಗತಿಕ, ಅನಾಥ ಮತ್ತು ಅಶಕ್ತ ಗೋವುಗಳಿಗೆ ರಕ್ಷಣೆ ಮತ್ತು ಅವುಗಳ ಬದುಕಿಗೆ ಪೂರಕ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಟ್ರಸ್ಟ್‌ನ ಆಶ್ರಯದಡಿಯಲ್ಲಿ ‘ನಂದಗೋಕುಲ ಗೋಶಾಲೆ’ ಯನ್ನು ಆರಂಭಿಸಲಾಯಿತು. ಗೋ ಶಾಲೆಯಲ್ಲಿ ಪ್ರಕೃತ 240 ಕ್ಕಿಂತಲೂ ಹೆಚ್ಚು ಅನಾಥ ಹಾಗೂ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ ಗೋವುಗಳು ನೆಮ್ಮದಿಯ ದಿನಗಳನ್ನು ಕಾಣುತ್ತಿವೆ. ಅಲ್ಲದೇ ಗೋಶಾಲೆಯ ಮೂಲಕ ‘ಹೈನುಗಾರರಿಗೆ ಹಾಗೂ ಕೃಷಿಕರಿಗೆ ದೇಶೀ ಗೋತಳಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅವುಗಳನ್ನು ಸಾಕುವಂತೆ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು.
‘ನಂದಗೋಕುಲದಲ್ಲಿ ಇನ್ನಷ್ಟು ಅನಾಥ ಗೋವುಗಳಿಗೆ ರಕ್ಷಣೆ, ಅದಕ್ಕಾಗಿ ಹಟ್ಟಿಗಳ ನಿರ್ಮಾಣ, ಮೇವಿನ ವ್ಯವಸ್ಥೆ ಎರೆಗೊಬ್ಬರ ಘಟಕ, ಹಣತೆ, ದೂಪದ ಕಡ್ಡಿ ಇತ್ಯಾದಿ ಉಪ ಉತ್ಪನ್ನಗಳ ತಯಾರಿಗಾಗಿ ಯಂತ್ರೋಪಕರಣಗಳು ಮುಂತಾದವುಗಳ ಅವಶ್ಯಕತೆ ಇರುತ್ತಿದ್ದು, ಅದರ ಜೊತೆಗೆ ಈಗಾಗಲೇ ಇರುವ ಗೋವುಗಳ ಮೇವಿಗಾಗಿ ಸಮಾಜದ ಸಹಕಾರ ಬೇಕಾಗಿರುತ್ತದೆ. ಅದಕ್ಕಾಗಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಗೋಮಾತೆಗೆ ಗೋಗ್ರಾಸ ಸಂಗ್ರಹದ ‘ಗೋಗ್ರಾಸ ಹೊರೆಕಾಣಿಕೆ ಅರ್ಪಣೆ’ಯ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಗೋಪ್ರೇಮಿಗಳು ಹಸಿ ಹುಲ್ಲು, ಒಣಹುಲ್ಲು ಪಶು ಆಹಾರ, ಕೃಷಿ ಉತ್ಪನ್ನಗಳಾದ ಅಡಿಕೆ, ತೆಂಗಿನಕಾಯಿ, ಅಕ್ಕಿ ಇತ್ಯಾದಿಗಳನ್ನು ಹೊರೆಕಾಣಿಕೆಯಾಗಿ ಅರ್ಪಿಸಬಹುದು.ಸಾರ್ವಜನಿಕರು ಗೋಗ್ರಾಸ ಅರ್ಪಿಸಿ, ತನು, ಮನ, ಧನದ ಸಹಕಾರವನ್ನು ನೀಡಬೇಕು ಎಂದು ಅವರು ವಿನಂತಿಸಿಕೊಂಡರು.
ನಂದಗೋಕುಲ ದೀಪೋತ್ಸವ: ಮೇ 26 ರಂದು ಕಾಮಧೇನು ವೇದಿಕೆ, ನಂದಗೋಕುಲ ಗೋಶಾಲೆ ಕಾಯರ್ತಡ್ಕ, ಕಳೆಂಜದಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮದ ಬಳಿಕ ಇಳಿ ಸಂಜೆ 6.30ರ ಹೊತ್ತಿಗೆ ಗೋ ಶಾಲೆಯಲ್ಲಿ ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಇವರ ಗೌರವಾಧ್ಯಕ್ಷತೆಯ ಸಮಿತಿ ನೇತೃತ್ವದಲ್ಲಿ ಮಾನವನ ಬದುಕಿನ ಸಂಜೀವಿನಿಯಾದ ಜಗಜ್ಜನನಿ ಗೋಮಾತೆಗೆ ಪ್ರಣಾಮ ಸಲ್ಲಿಸುವ ವಿಶಿಷ್ಠ ಕಾರ್ಯಕ್ರಮ ನಡೆಯಲಿದ್ದು “ನಂದಗೋಕುಲ ದೀಪೋತ್ಸವ” ಪುಣ್ಯಕೋಟಿಗೆ ಒಂದು ಕೋಟಿ. ಗೋಮಾತೆಗೆ ಕೋಟಿಯ ನಮನ” ಸಾಮೂಹಿಕ ಗೋಪೂಜೆ, ಗೋನಂದಾರತಿ ಮತ್ತು ದೀಪೋತ್ಸ ಕಾರ್ಯಕ್ರಮವು ನಡೆಯಲಿದೆ ಎಂದರು.
Post Comment