ಮಹಿಳೆಯರು,ಮಕ್ಕಳಿದ್ದ ಕಾರು ತಡೆದು ತಂಡದಿಂದ ಹಲ್ಲೆ ,ಅಸಭ್ಯ ವರ್ತನೆ: ಪರಾರಿಯಾದ ಆರೋಪಿಗಳ ಪತ್ತೆಗೆ ಶೋಧ

ಬೆಳ್ತಂಗಡಿ : ಬೈಕಿನಲ್ಲಿ ಬಂದ ಗುಂಪೊಂದು ಕಾರನ್ನು ಅಡ್ಡಗಟ್ಟಿದ್ದಲ್ಲದೆ ಚಾಲಕ ಸೇರಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಶುಕ್ರವಾರ ರಾತ್ರಿ ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಅಬ್ದುಲ್ ಫಾರುಕ್, ಮೈಮುನಾ, ಸೌಧಾ, ಮೈಮುನಾ ಸಿದ್ದಿಕ್ ಹಾಗೂ ಮಕ್ಕಳು ಉಜಿರೆಯಲ್ಲಿನ ಸಂಬಂಧಿಕರ ಮನೆಗೆ ಹೋದವರು ರಾತ್ರಿ 11.30ರ ಹೊತ್ತಿಗೆ ವಾಪಾಸು ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಕನ್ಯಾಡಿ ಶಾಲೆಯ ಸಮೀಪ ತಲುಪಿದಾಗ ಬೈಕ್ ಗಳಲ್ಲಿ ಬಂದ ಮೂವರ ತಂಡ ಕಾರನ್ನು ತಡೆದು ಚಾಲಕನಿಗೆ ಹಲ್ಲೆನಡೆಸಿ ಕಾರಿನ ಕೀಯನ್ನು ಕಸಿದುಕೊಂಡಿದ್ದಲ್ಲದೆ, ಡೋರ್ ಅನ್ನು ಬಲವಂತವಾಗಿ ತೆರೆದು ಮಹಿಳೆಯರ ಮೇಲೆ ಕೈಮಾಡಿ ಅಸಭ್ಯವಾಗಿ ವರ್ತಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಎಸೆದು ಹಾನಿಗೊಳಿಸಿ ಪರಾರಿಯಾಗಿದ್ದಾರೆ.
ಇದೇ ಸಂದರ್ಭ ಕಾರಿನ ಮೇಲೂ ಕಾಲಿನಿಂದ ತುಳಿದಿದ್ದಾರೆ. ಆತಂಕಗೊಂಡು ಕಾರಿನಲ್ಲಿದ್ದವರು ಬೊಬ್ಬೆ ಹಾಕಿದ್ದು ಪರಿಚಯದವರು ಮಧ್ಯೆ ಪ್ರವೇಶಿಸಿ ವಾಹನ ನಿಲ್ಲಿಸಿ ಜಗಳ ಬಿಡಿಸಿದ್ದಾರೆ. ಆದರೆ ಆರೋಪಿಗಳು ಅವಾಚ್ಯವಾಗಿ ಬೈಯ್ದು ಪೊಲೀಸರಿಗೆ ದೂರು ನೀಡಿದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿ ಪರಾರಿ ಯಾಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
Post Comment